ಕಸ್ತೂರಿ 1

 ಹುಬ್ಬಳ್ಳಿಯಿಂದ ಪ್ರಕಟವಾಗುವ ಕನ್ನಡ ಮಾಸ ಪತ್ರಿಕೆ; ಸಾರಸಂಗ್ರಹ. ಸಂಕ್ಷೇಪಿತ ಲೇಖನಗಳನ್ನೊಳಗೊಂಡ ಈ ಬಗೆಯ ಪತ್ರಿಕೆಗಳದು 20ನೆಯ ಶತಮಾನದ ಪತ್ರಿಕಾ ವ್ಯವಸಾಯದಲ್ಲಿ ಒಂದು ಹೊಸ ಪ್ರಕಾರ. ಇಂಥ ಮಾಸ ಪತ್ರಿಕೆಗಳು ಒಂದನೆಯ ಮಹಾಯುದ್ಧದ ಅನಂತರದ ಕಾಲದಿಂದ ತಕ್ಕಮಟ್ಟಿಗೆ ಯಶಸ್ವಿಯಾಗಿ ನಡೆದು ಬಂದಿವೆ. ಇಂಗ್ಲಿಷಿನ ಅತ್ಯಂತ ಯಶಸ್ವಿ ಪತ್ರಿಕೆಯಾದ ರೀಡರ್ಸ್ ಡೈಜೆಸ್ಟ್ ಮಾದರಿಯನ್ನನುಸರಿಸಿ ಕನ್ನಡದ ನೆಲನೀರುಗಳಿಗೆ ಅಗತ್ಯವಾದ ಕೆಲವು ಬದಲಾವಣೆಗಳೊಂದಿಗೆ ಪ್ರಪ್ರಥಮ ಮಾಸಿಕ ಸಾರಸಂಗ್ರಹವಾಗಿ 1956ರ ಸೆಪ್ಟೆಂಬರಿನಲ್ಲಿ ಈ ಪತ್ರಿಕೆಯ ಪ್ರಕಟಣೆ ಆರಂಭವಾಯಿತು. 1958 ರ ಆಗಸ್ಟ್‍ವರೆಗೆ ಮೊಹರೆ ಹನುಮಂತರಾಯರು ಇದರ ಸಂಪಾದಕರಾಗಿದ್ದರು. ಅನಂತರ ಸಂಯುಕ್ತ ಕರ್ನಾಟಕ ಮತ್ತು ಕರ್ಮವೀರ ಪತ್ರಿಕೆಗಳ ಪ್ರಧಾನ ಸಂಪಾದಕರಾದ ರಂಗನಾಥ ದಿವಾಕರರೇ ಇದರ ಪ್ರಧಾನ ಸಂಪಾದಕರೂ ಆದರು. ಲೋಕ ಶಿಕ್ಷಣ ಟ್ರಸ್ಟಿನ ಪ್ರಕಟಣೆಯಿದು.

 ಪತ್ರಿಕೆ 71/2” ್ಠ 5" ಆಕಾರದ 152 ಪುಟಗಳನ್ನೊಳಗೊಂಡಿರುತ್ತದೆ. ಮುಖಚಿತ್ರ ವರ್ಣರಂಜಿತವಾದದ್ದು. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ಮೊದಲು 75 ಪೈಸೆಯಿತ್ತು. ಈಗ ರೂ. 1. ಪ್ರತಿ ಸಂಚಿಕೆಯಲ್ಲೂ 25-30 ವಿಷಯಗಳಿರುತ್ತವೆ. ಇವುಗಳಲ್ಲಿ 3-4 ಮಾತ್ರ ಕಥೆಗಳು; ಉಳಿದವೆಲ್ಲ ಗಂಭೀರ ವಿಷಯಗಳು. ಕೊನೆಯ ಸುಮಾರು 20 ಪುಟಗಳಲ್ಲಿ ಯಾವುದಾದರೊಂದು ಪ್ರಸಿದ್ಧ ಪುಸ್ತಕದ ಸಂಗ್ರಹ ಇರುತ್ತದೆ. ಒಟ್ಟಿನ ಮೇಲೆ ಶೇ. 65 ರಿಂದ 75 ರ ವರೆಗೆ ಕಥೇತರ ವಿಷಯಗಳನ್ನೊಳಗೊಂಡ ಈ ಮಾಸಪತ್ರಿಕೆ ತುಂಬ ಜನಪ್ರಿಯವಾಗಿದೆ.

 ಕಸ್ತೂರಿ ತೀರ ಗಹನವೂ ಅಲ್ಲದೆ ತೀರ ಸಾಮಾನ್ಯ ಮನೋರಂಜನೆಗೂ ಮೀಸಲಾಗಿಲ್ಲದೆ, ಸುಶಿಕ್ಷಿತ ವರ್ಗದ ಓದುಗರನ್ನು ಗುರಿಯಾಗಿಟ್ಟುಕೊಂಡು ಲೇಖನಗಳನ್ನು ಆರಿಸುತ್ತದೆ. ಅದು ಭಾರತೀಯ ಅಥವಾ ವಿದೇಶಿ ಇಂಗ್ಲಿಷ್ ಪುಸ್ತಕ ಪತ್ರಿಕೆಗಳಿಂದಲ್ಲದೆ ಎಲ್ಲ ಪ್ರೌಢ ಭಾರತೀಯ ಭಾಷೆಗಳಿಂದಲೂ ಕಥೆ ಮತ್ತು ಲೇಖನಗಳನ್ನು ಆಯ್ದುಕೊಳ್ಳುತ್ತದೆ. ಇವಲ್ಲದೆ ಸ್ವತಂತ್ರ ಲೇಖನ ಮತ್ತು ಕಥೆಗಳನ್ನು ಸಾಕಷ್ಟು ಒಳಗೊಂಡಿರುತ್ತದೆ. ಒಂದು ಮಾದರಿ ಸಂಚಿಕೆಯಲ್ಲಿ ಇಂಗ್ಲಿಷ್, ಹಿಂದಿ, ಮರಾಠಿ, ಬಂಗಾಲಿ, ತೆಲುಗು, ತಮಿಳು, ಮಲಯಾಳಿ ಲೇಖನ ಅಥವಾ ಕಥೆಗಳು ಇರಬಹುದು. ಪ್ರತಿಸಲವೂ ಜೀವನಚರಿತ್ರೆ ಮತ್ತು ವ್ಯಕ್ತಿಚಿತ್ರಗಳೂ ವಿಜ್ಞಾನ, ವೈದ್ಯಕೀಯ, ರಾಜಕೀಯ, ಸಾಮಾಜಿಕ, ಭೌಗೋಳಿಕ ವಿಷಯಗಳೂ ಇರುತ್ತವೆ. ರಾಜಕೀಯದಲ್ಲಿ ಪಕ್ಷಪಂಥಗಳ ಪ್ರತಿಪಾದನೆಗಿಂತಲೂ ವಿಷಯಗಳ ನೇರವಾದ ನಿರ್ವಿಕಾರವಾದ ವಿವರಣೆಗೆ ಪ್ರಾಧಾನ್ಯ ಕೊಡಲಾಗುತ್ತದೆ. ವಿಜ್ಞಾನದಲ್ಲಿ ಅತ್ಯಾಧುನಿಕ ಸಂಶೋಧನೆಗಳ ಗಮನಾರ್ಹ ಅಂಶಗಳನ್ನು ಪರಿಚಯ ಮಾಡಿಕೊಡಲಾಗುತ್ತದೆ. ಹೆಚ್ಚಿನ ವಿಷಯಗಳು ಸಚಿತ್ರವಾಗಿರುತ್ತವೆ. ಸಂಪಾದನ ಕಾರ್ಯದಲ್ಲಿ ಬಹಳ ಎಚ್ಚರಿಕೆ ವಹಿಸಲಾಗುತ್ತದೆ. ಸುಶಿಕ್ಷಿತ ಆದರೆ ಸಾಮಾನ್ಯಮಟ್ಟದ ಓದುಗರಿಗೆ ಅರ್ಥವಾಗುವ ಸರಳ ಶೈಲಿಯನ್ನು ಉಪಯೋಗಿಸಲಾಗುತ್ತದೆ. ಪ್ರಾಚೀನ ಸಂಸ್ಕøತಿಯನ್ನು ನಿರಾಕರಿಸದೆ ಆಧುನಿಕ ಜಗತ್ತಿನ ಆಗುಹೋಗುಗಳ ಪರಿಜ್ಞಾನವನ್ನು ಅದು ಒದಗಿಸುತ್ತದೆ.

 ಪಾವೆಂ ಎಂದೇ ಹೆಸರಾದ ಪಾಡಿಗಾರು ವೆಂಕರಮಣಾಚಾರ್ಯ ದೀರ್ಘಕಾಲ ಇದರ ಸಂಪಾದಕರಾಗಿ ಅಚ್ಚುಕಟ್ಟಾಗಿ ಹೊಣೆ ನಿರ್ವಹಿಸಿದರು. ಡೈಜೆಸ್ಟ್‍ಗಳಿಗೆ ಸೂಕ್ತವಾದ ವಿಶಿಷ್ಟ ವಿಷಯ ಸಂಗ್ರಹ. ಬರವಣಿಗೆಯಲ್ಲಿ ಹೊಸ ಲೇಖಕರಿಗೆ ಮಾರ್ಗದರ್ಶನ ನೀಡಿದರು. ಸದ್ಯದ ಸಂಪಾದಕ ಅರುಣ್ ನಾರಾಯಣ್. 2005ರಲ್ಲಿ ಕಸ್ತೂರಿ 50ನೇ ವರ್ಷಕ್ಕೆ ಪದಾರ್ಪಣೆ ಮಾಡಿತು. 

(ಪಿ.ವಿ.ಎ.) 

(ಪರಿಷ್ಕರಣೆ: ಈಶ್ವರ ದೈತೋಟ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ